ರಂಗಣ್ಣ, ಎಸ್ ವಿ -  	1898-1987. ಹೆಸರಾಂತ ವಿಮರ್ಶಕರು, ಸಾಹಿತಿಗಳು. ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿವಿಜೇತರು. ಹುಟ್ಟಿದ್ದು ಹಾಸನ ಜಿಲ್ಲೆಯ ಸಾಲಗಾಮೆಯಲ್ಲಿ (24-12-1898). ತಂದೆ ವೆಂಕಟಸುಬ್ಬಯ್ಯ. ತಾಯಿ ವೆಂಕಟಲಕ್ಷ್ಮಮ್ಮ. ಇವರ ಪ್ರೌಢಶಾಲಾ ವ್ಯಾಸಂಗ ಚಿಕ್ಕಮಗಳೂರಿನಲ್ಲಿಯೂ ಇಂಟರ್‍ಮೀಡಿಯೆಟ್ ಮತ್ತು ಬಿ.ಎ. ಪದವಿಯ ವಿದ್ಯಾಭ್ಯಾಸ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿಯೂ ಜರುಗಿತ್ತು. ಆಗ್ಗೆ ಸೆಂಟ್ರಲ್ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಜೆ.ಜೆ. ಟೇಟರು ಇವರ ಮೇಲೆ ಅತಿಶಯವಾದ ಪ್ರಭಾವವನ್ನು ಬೀರಿದುದಲ್ಲದೆ, ಇಂಗ್ಲಿಷ್ ಸಾಹಿತ್ಯದಲ್ಲಿ ವಿಶೇಷವಾದ ಅಕ್ಕರೆಯನ್ನುಂಟುಮಾಡಿದರು. ಇದೇ ಕಾಲದಲ್ಲಿ ಆ ಕಾಲೇಜಿನಲ್ಲಿ ಕನ್ನಡ ಬೋಧಕರಾಗಿದ್ದ ಎ.ಆರ್. ಕೃಷ್ಣಶಾಸ್ತ್ರೀಗಳು ರಂಗಣ್ಣನವರಲ್ಲಿ ಕನ್ನಡದ ಅಭಿಮಾನ ಮೂಡುವುದಕ್ಕೆ ಭದ್ರವಾದ ತಳಹದಿಯನ್ನು ಹಾಕಿದರು. ವ್ಯಾಸಂಗದ ಉದ್ದಕ್ಕೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ರಂಗಣ್ಣನವರು 1919ರಲ್ಲಿ ಪ್ರಥಮದರ್ಜೆಯಲ್ಲಿ ಬಿ.ಎ. ಪದವಿ ಪಡೆದರು. ಅದೇ ವರ್ಷ ವೈಸೂರಿಗೆ ಬಂದ ಇವರು, ಮಹಾರಾಜ ಕಾಲೇಜನ್ನು ಸೇರಿ, ಅಧ್ಯಾಪಕತ್ವದ (ಟ್ಯೂಟರ್) ಜೊತೆಗೆ 1921ರಲ್ಲಿ ಪ್ರಥಮ ಶ್ರೇಣಿಯಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿಯನ್ನು ಗಳಿಸಿಕೊಂಡರು.

ಮಹಾರಾಜ ಕಾಲೇಜಿನಲ್ಲಿ 1923ರಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ನೇಮಕಗೊಂಡ ರಂಗಣ್ಣನವರು 1928-33ರ ವರೆಗೆ ತುಮಕೂರಿನ ಇಂಟರ್‍ಮೀಡಿಯೆಟ್ ಕಾಲೇಜಿನ ಸೂಪರಿಟೆಂಡೆಂಟರಾಗಿದ್ದು ಅದೇ ವರ್ಷ ಸೆಂಟ್ರಲ್ ಕಾಲೇಜಿಗೆ ಹಿಂದಿರುಗಿದರು. ಅಲ್ಲಿ ಇಂಗ್ಲಿಷ್ ಭಾಷಾಸಾಹಿತ್ಯಗಳ ಉಪಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಕೆಲಸಮಾಡಿ 1945ರಲ್ಲಿ ಮತ್ತೆ ಮೈಸೂರಿನ ಮಹಾರಾಜ ಕಾಲೇಜಿಗೆ ಪ್ರಾಧ್ಯಾಪಕರಾಗಿ ಬಂದರು. ಅನಂತರ ಇಂಗ್ಲಿಷ್ ಇಲಾಖೆಯ ಮುಖ್ಯಸ್ಥರಾಗಿದ್ದುದಲ್ಲದೆ ಪ್ರಿನ್ಸಿಪಾಲರಾಗಿಯೂ ಕಾರ್ಯನಿರ್ಮಹಿಸಿ 1954ರಲ್ಲಿ ನಿವೃತ್ತರಾದರು.
ರಂಗಣ್ಣನವರ ಕಾರ್ಯರಂಗ ಬೋಧನೆಗೆ ಸೀಮಿತವಾಗಿರಲಿಲ್ಲ. ಇವರು ಭಾಗವಹಿಸುತ್ತಿದ್ದ ಇತರ ಚಟುವಟಿಕೆಗಳಲ್ಲಿ ಕೆಲವನ್ನು ಇಲ್ಲಿ ಹೆಸರಿಸಬಹುದು. ಮೊದಲನೆಯದಾಗಿ ಇವರು ತಾವು ಇತರ ಭಾಷೆಗಳ-ಮುಖ್ಯವಾಗಿ ಇಂಗ್ಲಿಷ್ ಮೂಲಕ ಸಂಪಾದಿಸಿದ ಜ್ಞಾನವನ್ನು ತಮ್ಮ ಗುರುಗಳಾದ ಬಿ.ಎಂ. ಶ್ರೀಕಂಠಯ್ಯನವರ ಪ್ರೇರಣೆಯಂತೆ ಕನ್ನಡದ ಮೂಲಕ ಹರಿಸಲು ಸಂಕಲ್ಪಿಸಿ ನಾಡಿನ ಉದ್ದಗಲಕ್ಕೂ ಸಂಚರಿಸಿ ಉಪನ್ಯಾಸಗಳ ಮೂಲಕ, ಬರೆಹಗಳ ಮೂಲಕ ಜನತೆಯಲ್ಲಿ ಭಾಷಾಭಿಮಾನವನ್ನು ಬೆಳೆಸಲು ಪ್ರಯತ್ನಿಸಿದರು. ಎರಡನೆಯದಾಗಿ 1925ರಲ್ಲಿ ರೋವರ್ ಸ್ಕೌಟ್ ಚಳವಳಿಗೆ ಧುಮುಕಿದ ಇವರು ತಮ್ಮ ಕೊನೆಯ ಉಸಿರಿರುವವರೆಗೆ ಈ ಚಳವಳಿಯಲ್ಲಿ ಕುಂದದ ಆಸಕ್ತಿಯನ್ನಿಟ್ಟುಕೊಂಡಿದ್ದರು. ಮೈಸೂರು ವಿಶ್ವಿವಿದ್ಯಾನಿಲಯದ ಯೂನಿಯನ್ ಶಾಖೆಗೆ ಇವರು ಕಾರ್ಯದರ್ಶಿಗಳಾಗಿದ್ದಾಗ ನಾಡಿನ ವಿವಿಧ ವಿದ್ವಾಂಸರ ಸಹಕಾರದಿಂದ 1928ರಲ್ಲಿ ರನ್ನಕವಿ ಪ್ರಶಸ್ತಿ ಎಂಬ ವಿಮರ್ಶಾ ಗ್ರಂಥವನ್ನು ಹೊರ ತಂದರು. 1933ರಲ್ಲಿ ತುಮಕೂರಿನಿಂದ ಬೆಂಗಳೂರಿಗೆ ಬಂದ ಮೇಲೆ ಬೆಂಗಳೂರು ಶಾಖೆಯ ವಿಶ್ವವಿದ್ಯಾಲಯದ ಉಪಾಧ್ಯಾಯ ಸಂಘದ ಕಾರ್ಯದರ್ಶಿಯಾಗಿದ್ದು ನಾಡಿನ ಬೇರೆ ಬೇರೆ ಭಾಗಗಳಲ್ಲಿ ಕನ್ನಡದಲ್ಲಿ ಪ್ರಚಾರೋಪನ್ಯಾಸಗಳನ್ನು ಏರ್ಪಡಿಸಿದುದಲ್ಲದೆ ಅಂಥ ಕೆಲವು ಉಪನ್ಯಾಸಗಳನ್ನು ಪುಸ್ತಕ ರೂಪದಲ್ಲೂ ಪ್ರಕಟಿಸಿದರು. ಬಿ.ಎಂ. ಶ್ರೀಕಂಠಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದಾಗ ರಂಗಣ್ಣನವರು ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದರು. ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್-ಕನ್ನಡ ನಿಘಂಟಿನ ಪರಿಷ್ಕರಣ ಯೋಜನೆಯ ಪ್ರಧಾನ ಸಂಪಾದಕರಾಗಿ ಇವರು ಸ್ವಲ್ಪಕಾಲ ಕಾರ್ಯನಿರ್ವಹಿಸಿದರು. ಮೈಸೂರು ವಿಶ್ವದ್ಯಾನಿಲಯದ ಸಹಕಾರ ಸಂಘ, ಮೈಸೂರು ನಗರದ ಪದವೀಧರರ ಸಹಕಾರ ಸಂಘ, ಮೈಸೂರಿನ ಅನಾಥಾಲಯ ಇವುಗಳ ಅಧ್ಯಕ್ಷರಾಗಿ, ಮೈಸೂರಿನ ಶಾರದಾ ವಿಲಾಸ ವಿದ್ಯಾಸಂಸ್ಥೆಗಳ ಗೌರವ ಸದಸ್ಯರಾಗಿ ಇವರು ಸೇವೆ ಸಲ್ಲಿಸಿದ್ದಾರೆ.

ಈ ಎಲ್ಲ ಚಟುವಟಿಕೆಗಳನ್ನು ಮೀರಿಸಿ ಇವರಿಗೆ ಕನ್ನಡ ಸಾಹಿತ್ಯದಲ್ಲಿ ಶಾಶ್ವತ ಕೀರ್ತಿಯನ್ನು ತಂದುಕೊಟ್ಟಿರುವುದು ಇವರ ಸಾಹಿತ್ಯ ನಿರ್ಮಾಣಕಾರ್ಯ. ಪ್ರಬುದ್ಧ ಕರ್ಣಾಟಕದ ಮೊಟ್ಟಮೊದಲ ಸಂಚಿಕೆಯಲ್ಲಿ ಕನ್ನಡ ಸಾಹಿತ್ಯದ ಗುಣದೋಷಗಳು ಎಂಬ ಇವರ ಮೊದಲ ಲೇಖನ ಪ್ರಕಟವಾಯಿತು. ಪ್ರಕಟವಾದ ಇವರ ಮೊದಲ ಪುಸ್ತಕ ಕುಮಾರವ್ಯಾಸ. ಅನೇಕ ಲೇಖನಗಳು ಕನ್ನಡದ ವಿದ್ವತ್ಪತ್ರಿಕೆಗಳಲ್ಲಿ ಚದುರಿಹೋಗಿವೆ. ಹೊಸಗನ್ನಡದಲ್ಲಿ ನೂತನ ವಿಮರ್ಶೆಯ ಮಾರ್ಗವನ್ನು ಸ್ಥಾಪಿಸಿದ ಕೀರ್ತಿ ರಂಗಣ್ಣನವರಿಗೆ ಸಲ್ಲುತ್ತದೆ. ರನ್ನಕವಿಪ್ರಶಸ್ತಿಯಲ್ಲಿರುವ ರನ್ನನ ಶೈಲಿ ಎಂಬ ಇವರ ಲೇಖನ ಕನ್ನಡದ ಬೇರೆ ಬೇರೆ ಕವಿಗಳ ಶೈಲಿಯನ್ನು ವಿಮರ್ಶಿಸುವುದಕ್ಕೆ ನಾಂದಿಯಾಯಿತು. ಪಂಪ, ರನ್ನ, ಜನ್ನ, ನಾಗಚಂದ್ರ, ಹರಿಹರ, ರಾಘವಾಂಕ, ಲಕ್ಷ್ಮೀಶ, ಕನಕದಾಸ ಕನ್ನಡದ ಹಿರಿಯ ಕವಿಗಳ ಶೈಲಿಯನ್ನು ಕುರಿತು ವಿಮರ್ಶಿಸಿದ್ದಾರೆ. ಇವೆಲ್ಲ ಶೈಲಿ ಎಂಬ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ. ಸಾಮಾನ್ಯ ಚಿತ್ರಕ್ಕೆ ಸುವರ್ಣದ ಚೌಕಟ್ಟು, ಗದಾಯುದ್ಧ ನಾಟಕವನ್ನು ಕುರಿತ ವಿಮರ್ಶೆ ಈ ಮುಂತಾದ ಬಿಸಿಲೇಖನಗಳ ಸಂಗ್ರಹ ಹೊನ್ನಶೂಲ 1959ರಲ್ಲಿ ಪ್ರಕಟವಾಯಿತು. ಸಾಮಾನ್ಯ ಚಿತ್ರಕ್ಕೆ ಸುವರ್ಣದ ಚೌಕಟ್ಟು ಎಂಬ ಲೇಖನ ಮುದ್ದಣನ ರಾಮಾಶ್ವಮೇಧ ಕಾವ್ಯವನ್ನು ಕುರಿತ ಮಹತ್ವಪೂರ್ಣ ವಿಮರ್ಶೆಯಾಗಿದೆ. ಕಾಳಿದಾಸನ ನಾಟಕಗಳ ವಿಮರ್ಶೆ, ಪಾಶ್ಚಾತ್ಯ ಗಂಭೀರ ನಾಟಕಗಳು ಈ ಗ್ರಂಥಗಳು ಕನ್ನಡದಲ್ಲಿ ವಿಮರ್ಶೆಯ ಹೊಸ ಕಾಣಿಕೆಗಳನ್ನು ಮೂಡಿಸಿವೆ. ಈ ಗ್ರಂಥಗಳೊಂದಿಗೆ ಮೈಸೂರು ವಿಶ್ವವಿದ್ಯಾನಿಲಯದ ಪ್ರಚಾರೋಪನ್ಯಾಸಮಾಲೆಯಲ್ಲಿ ಪ್ರಕಟವಾಗಿರುವ ಕುಮಾರವ್ಯಾಸ, ಕುಮಾರವ್ಯಾಸವಾಣಿ ವಿಡಂಬನೆ, ಹಾಸ್ಯ ಈ ಕಿರುಹೊತ್ತಿಗೆಗಳನ್ನೂ ಸೇರಿಸಿಕೊಳ್ಳಬೇಕು. 1970ರಲ್ಲಿ ಪ್ರಕಟವಾದ ಇತರ ಪಾಶ್ಚಾತ್ಯ ಗಂಭೀರ ನಾಟಕಗಳು ಒಂದು ಬೃಹತ್ ಗ್ರಂಥ, ಗ್ರೀಸ್, ಇಟಲಿ, ಸ್ಪೇನ್, ಇಂಗ್ಲೆಂಡ್, ಫ್ರಾನ್ಸ್, ರಷ್ಯ, ನಾರ್ವೆ ಮುಂತಾದ ಯುರೋಪಿನ ದೇಶಗಳಲ್ಲಿ ಗಂಭೀರ ನಾಟಕಗಳು ಬೆಳೆದುಬಂದ ಬಗೆ. ಅಲ್ಲಿನ ಮುಖ್ಯ ಗಂಭೀರ ನಾಟಕಕಾರರು ಮತ್ತು ಅವರ ಕೃತಿಗಳ ವಿಮರ್ಶೆಯನ್ನು ಮಾಡಿಕೊಡುವ ಈ ಗ್ರಂಥ ಪಾಶ್ಚಾತ್ಯ ಗಂಭೀರ ನಾಟಕಗಳ ವಿಶ್ವಕೋಶದಂತಿದೆ. 

ರಂಗಣ್ಣನವರ ಸಾಹಿತ್ಯಕ ಚಟುವಟಿಕೆ ವಿಮರ್ಶೆಯ ಕ್ಷೇತ್ರಕ್ಕೆ ಮಾತ್ರ ಪರಿಮಿತವಾಗದೆ ಸೃಜನಾತ್ಮಕ ಸಾಹಿತ್ಯಕ್ಕೂ ಕೈಚಾಚಿದೆ. ಇವರು ಬರೆದಿರುವ ಹಲವು ನಾಟಕಗಳಲ್ಲಿ ಹರಿಶ್ಚಂದ್ರ ಪ್ರಖ್ಯಾತವಾಗಿವೆ. ಗದಾಯುದ್ಧದಿಂದ ಶ್ರೀಯವರು ಗದಾಯುದ್ಧ ನಾಟಕವನ್ನು ಕಂಡರಿಸಿದಂತೆ, ರಂಗಣ್ಣನವರು ರಾಘವಾಂಕನ ಹರಿಶ್ಚಂದ್ರ ಕಾವ್ಯದಿಂದ ಹರಿಶ್ಚಂದ್ರ ನಾಟಕವನ್ನು ಸಿದ್ಧಪಡಿಸಿದ್ದಾರೆ. ಪಾಶ್ಚಾತ್ಯ ಕವಿಗಳ ಜೀವನ, ಸ್ವಭಾವ, ಚರ್ಯೆ ಇವೇ ಮೊದಲಾದ ನಾನಾ ಭಾವಗಳನ್ನು ನಾನಾ ಭಾವಗಳನ್ನು ಕವಿ ಕಥಾಮೃತದಲ್ಲಿ (1972) ಚಿತ್ರಿಸಿದ್ದಾರೆ. ರಂಗಬಿನ್ನಪ (1963) ಇವರ ಇನ್ನೊಂದು ಗಣ್ಯಕೃತಿ. ಇಲ್ಲಿನ ವಚನಗಳು ಒಂದು ಸಾಲಿನಿಂದ ಹಿಡಿದು ಒಂದು ಪುಟಕ್ಕೂ ಮೀರಿ ಬೆಳೆಯುತ್ತ ಮಾನವಸ್ವಭಾವಗಳಾದ ಸುಖ, ದುಃಖ, ಆಶೆ, ನಿರಾಶೆ, ಮಾನ, ಅಪಮಾನ, ಕಷ್ಟಕಾರ್ಪಣ್ಯ, ಬದುಕನ್ನು ಎದುರಿಸಬೇಕೆಂಬ ಶ್ರದ್ಧೆ, ಧೈರ್ಯ, ಛಲ ಮೊದಲಾದ ನಾನಾ ಭಾವಗಳನ್ನು ಚಿತ್ರಿಸಿದ್ದಾನೆ. ಕೋಲ್ ಕೋಲ್ ಕೂಡಿ ಬರಲಿ (1976) ಎಂಬ ಇವರ ಇನ್ನೊಂದು ಗ್ರಂಥ, ಜನಪದ ಸಾಹಿತ್ಯವನ್ನು ಕುರಿತ ವಿಮರ್ಶೆಯನ್ನೂ ಇವರೇ ಸಂಗ್ರಹಿಸಿದ ಜನಪದಗೀತೆಗಳನ್ನೂ ಒಳಗೊಂಡಿದೆ.

ರಂಗಣ್ಣನವರು ಇಂಗ್ಲಿಷ್‍ನಲ್ಲೂ ಕೆಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಬಿ. ಎಂ. ಶ್ರೀಕಂಠಯ್ಯ, ದಿ ಲೇಡಿ ಅಂಡ್ ರಿಂಗ್, ಓಲ್ಡ್ ಟೇಲ್ಸ್ ರೀಟೋಲ್ಡ್, ಆನ್ ದಿ ಸೆಲ್ಟ್ ಇವು ಮುಖ್ಯವಾದವು. 
ತಮ್ಮ ಸಾಹಿತ್ಯ ರಚನೆಯಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ರಂಗಣ್ಣನವರನ್ನು ಕನ್ನಡ ಜನತೆ ಹಲವಾರು ರೀತಿಯಲ್ಲಿ ಗೌರವಿಸಿದೆ. ಇವರು ಕಾಲೇಜಿನ ಪ್ರಾಧ್ಯಾಪಕ ಹುದ್ದೆಯಿಂದ ನಿವೃತ್ತರಾದಾಗ ಶಿಷ್ಯರು, ಮಿತ್ರರು ಇವರಿಗೆ `ಬಾಗಿನ ಎಂಬ ಅಭಿನಂದನ ಗ್ರಂಥವನ್ನು ಅರ್ಪಿಸಿದರು ಸ್ಕೌಟ್ ಸೇವೆಗಾಗಿ ಇವರಿಗೆ `ರಜತ ಗಜ' ಎಂಬ ಪ್ರಶಸ್ತಿ ಬಂದಿದೆ. ಇವರ ರಂಗಬಿನ್ನಪಕ್ಕೆ 1965ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂತು. ಮೈಸೂರು ವಿಶ್ವವಿದ್ಯಾನಿಲಯ 1970ರಲ್ಲಿ ಇವರಿಗೆ ಗೌರವ ಡಿ. ಲಿಟ್. ಪದವಿಯನ್ನು ಕೊಟ್ಟು ಗೌರವಿಸಿತು. 1976ರಲ್ಲಿ ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ 49ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಕನ್ನಡ ಜನ ಇವರನ್ನು ಗೌರವಿಸಿದರು. ರಂಗಣ್ಣನವರು 1987ರ ಫೆಬ್ರುವರಿ 17 ರಂದು ಮೈಸೂರಿನಲ್ಲಿ ನಿಧನ ಹೊಂದಿದರು. 

ಕನ್ನಡ ಸಾಹಿತ್ಯದಲ್ಲಿ ಆಧುನಿಕತೆಯ ಗಾಳಿ ಬೀಸಿ ಹೊಸ ಮನೋಧರ್ಮದ ಸಾಹಿತ್ಯದ ಸೃಷ್ಟಿಯೂ ಪ್ರಾರಂಭವಾದ ಕಾಲದಲ್ಲಿ ಹೊಸ ಮನೋಧರ್ಮದ ಮತ್ತು ಹೊಸ ಪರಿಕರಗಳನ್ನು ಸಿದ್ಧಪಡಿಸಿಕೊಂಡ ಸಾಹಿತ್ಯ ವಿಮರ್ಶೆಯ ಅಗತ್ಯವೂ ಇದ್ದಿತು. ಈ ಅಗತ್ಯವನ್ನು ಸಮರ್ಥವಾಗಿ ತುಂಬಿಕೊಟ್ಟ ವಿಮರ್ಶಕರಲ್ಲಿ ರಂಗಣ್ಣನವರು ಒಬ್ಬರು. ಅವರ ವಿದ್ವತ್ತು ಅಗಾಧವಾದದ್ದು, ಸಂಸ್ಕøತ, ಇಂಗ್ಲಿಷ್, ಕನ್ನಡ ಭಾಷೆಗಳಲ್ಲಿನ ಸಾಹಿತ್ಯಗಳಲ್ಲಿ ಪಳಸ್ಪರ್ಶಿಯಾದ ವಿದ್ವತ್ತ ಅವರದು ಯೂರೋಪಿನ ಸಾಹಿತ್ಯಗಳನ್ನು ಆಳವಾಗಿ ಅಧ್ಯಯನ ಮಾಡಿದ್ದರು. ಕನ್ನಡದಲ್ಲಿ ವಿಮರ್ಶೆಯ ಜಗತ್ತಿನಲ್ಲಿ ಶೈಲಿಯ ವಿಶದವಾದ ಅಧ್ಯಯನವನ್ನು ಪ್ರಾರಂಭಿಸಿದವರು ರಂಗಣ್ಣನವರು. `ಸಾಮಾನ್ಯ ಚಿತ್ರಕ್ಕೆ ಸುವರ್ಣದ ಚೌಕಟ್ಟಿ ನಂಥ ಲೇಖನಗಳು ಸಾಹಿತ್ಯ ವಿಮರ್ಶೆಯ ಮಾನದಂಡಗಳ ಪುನರ್ವಿಮರ್ಶೆಯನ್ನು ಅಗತ್ಯಗೊಳಿಸಿದವು. ಅವರ ಮೇರು ಕೃತಿ `ಪಾಶ್ಚಾತ್ಯ ಗಂಭೀರ ನಾಟಕಗಳು (`ಟ್ರ್ಯಾಜಿಡಿ' ಎನ್ನುವುದಕ್ಕೆ `ಗಂಭೀರ ನಾಟಕ ವನ್ನು ಸಮಾನ ಪದವಾಗಿ ಬಳಸಿದ್ದರು ರಂಗಣ್ಣನವರು. ಇದು ಅಷ್ಟೇನೂ ಸಮರ್ಪಕವಲ್ಲ). ಯಾವ ಕೃತಿಯನ್ನಾಗಲಿ ಕೃತಿಕಾರನನ್ನಾಗಲಿ ವಿಮರ್ಶಿಸುವಾಗ ಅವರು ಆಗಲೇ ವ್ಯಕ್ತವಾಗಿರುವ ಮುಖ್ಯ, ವಿಮರ್ಶ ಪ್ರತಿಕ್ರಿಯೆಗಳನ್ನು ಗಮನಿಸಿ ವಿಶ್ಲೇಷಿಸಿ ತಮ್ಮ ಅಭಿಪ್ರಾಯವನ್ನು ವಿವರಿಸುತ್ತಾರೆ. ಈ ಕೃತಿಯಲ್ಲಿ ಅಗಾಧ ಪ್ರಮಾಣದ ಮಾಹಿತಿ ಇದೆ. ರಂಗಣ್ಣನವರ ಸಾಹತ್ಯ ಜೀವನದ ಉತ್ತರಾರ್ಧದಲ್ಲಿ ಅವರ ಶೈಲಿ ಅಲ್ಲಲ್ಲಿ ಸ್ವಲ್ಪ ಅಸಹಜವೂ ವಿಚಿತ್ರವೂ ಆಗುತ್ತಿತ್ತು. ಅದನ್ನು ಇಲ್ಲಿಯೂ ಕಾಣಬಹುದು. ಆದರೂ ಇದು ಕನ್ನಡದಲ್ಲಿ ಒಂದು ವಿಶಿಷ್ಟ ಆಕರ ಗ್ರಂಥ.    
(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ